ಗ್ರಾವೆಟ್ಟಿಯನ್ -
	ಫ್ರಾನ್ಸಿನ ನೈಋತ್ಯ ಭಾಗದಲ್ಲಿರುವ ಡಾರ್ಡಾನಿ ಬಳಿ ಕೌಜ್ ಕಣಿವೆಯ ಲಾ ಗ್ರಾವೆಟ್ಟಿ ಎಂಬಲ್ಲಿ, ಮುಖ್ಯವಾಗಿ ಗುಹೆಗಳಲ್ಲಿ ವಾಸಿಸುತ್ತಿದ್ದ ಜನರ ಸಂಸ್ಕøತಿ. ಇದು ವಾಸ್ತವವಾಗಿ ಒಂದು ಸಂಸ್ಕøತಿಯೆನಿಸಿಕೊಳ್ಳುವಷ್ಟು ವ್ಯಾಪಕವಲ್ಲವಾದರೂ ಪ್ರಾಗಿತಿಹಾಸ ಕಾಲದ ಒಂದು ಜನಸಮುದಾಯದ ಉತ್ಪನ್ನವೆಂದು ಊಹಿಸಲು ಸಾಧ್ಯವಾಗುವ ಮಟ್ಟಿಗೆ ಒಂದೇ ಬಗೆಯ ಉಪಕರಣಗಳನ್ನು ಈ ಜನ ತಯಾರಿಸುತ್ತಿದ್ದರು. ಇದು ಪ್ರಾಚೀನ ಶಿಲಾಯುಗದ ಸಂಸ್ಕøತಿಯ ಮೇಲಿನ ಹಂತಕ್ಕೆ ಸೇರಿದ್ದು; ಇದೇ ಹಂತದ ಆರಿಗ್ನೇಷಿಯನ್ ಸಂಸ್ಕøತಿಯ ಅನಂತರ ಬಂದದ್ದು. ಫ್ರೆಂಚ್ ಪರಿಭಾಷೆಯಲ್ಲಿ ಇದು ಮೇಲಣ ಪೆರಿಗೋರ್ಡಿಯನ್ ಸಂಸ್ಕøತಿಯ ಅತ್ಯಂತ ಪೂರ್ವದ ಹಂತ. ಕಿರಿದಾದ ಚೂಪಾದ ಮೊನೆಯಿರುವ ಬೆಣಚುಕಲ್ಲಿನ ಚಾಕುವಿನಾಕಾರದ ಉಪಕರಣಗಳು ಇದರ ಕೊಡುಗೆ. ಇವು ಚಾಟುಲ್ ಪೆರೋನಿಯನ್ ಸಂಸ್ಕøತಿಗೆ ಸೇರಿದ ಉಪಕರಣಗಳಿಗಿಂತ ಸೊಗಸಾದವೂ ವ್ಯವಸ್ಥಿತ ಆಕಾರವುಳ್ಳವೂ ಮೊಂಡಾದ ಹಿಡಿಗಳಿಂದ ಕೂಡಿದವೂ ಆಗಿವೆ. ಮೇಲಣ ಪೆರಿಗೋರ್ಡಿಯನ್ ಸಂಸ್ಕøತಿಯ ಎಲ್ಲ ಹಂತಗಳ ಉಪಕರಣಗಳನ್ನೂ ಗ್ರಾವೆಟ್ಟಿಯನ್ ಎಂದು ಹೇಳುವುದೂ ಉಂಟು. ವಾಸ್ತವವಾಗಿ ಗ್ರಾವೆಟ್ಟಿಯನ್ ಎಂದು ಹೇಳಬಹುದಾದ ಸಂಸ್ಕøತಿ ಕ್ರಿ.ಪೂ. 25000ಕ್ಕಿಂತ ಸ್ವಲ್ಪ ಹಿಂದಿನದು.

	ಇದಕ್ಕೆ ಸಮನಾದ, ಪೂರ್ವ ಗ್ರಾವೆಟ್ಟಿಯನ್ ಎಂದು ಕರೆಯಬಹುದಾದ ಸಂಸ್ಕøತಿಯೊಂದು ಇದೇ ಕಾಲದಲ್ಲಿ ರಷ್ಯದ ದಕ್ಷಿಣ ಭಾಗದ ಮೈದಾನಗಳಲ್ಲಿ ನೆಲೆಗೊಂಡು ಅಭಿವೃದ್ಧಿಹೊಂದುತ್ತಿತ್ತು. ಪೂರ್ವ ಗ್ರಾವೆಟ್ಟಿಯನ್ ಬೇಟೆಗಾರರು ಪಶ್ಚಿಮಾಭಿಮುಖವಾಗಿ ಆಲ್ಟ್ಸ್ ಹಾಗೂ ಕಾರ್ಪೇತಿಯನ್ ಪ್ರದೇಶಗಳತ್ತ ವಲಸೆ ಹೋಗಲು ಪ್ರಾರಂಬಿಸಿದರು. ಇವರು ರಷ್ಯದ ದಕ್ಷಿಣ ಭಾಗದಲ್ಲಿ ಹಾಗೂ ಮೊರೇವಿಯದಲ್ಲಿ (ಚೆಕೊಸ್ಲವಾಕಿಯ) ಬೃಹದ್ಗಜಗಳನ್ನು ಬೇಟೆಯಾಡುವುದರಲ್ಲಿ ವಿಶೇಷ ಪರಿಶ್ರಮ ಪಡೆದಿದ್ದರು. ಆದರೆ ಫ್ರಾನ್ಸಿನ ಪೂರ್ವ ಭಾಗದ ಗ್ರಾವೆಟ್ಟಿಯನರು ಕಾಡುಕುದುರೆಗಳನ್ನು ಬೇಟೆಯಾಡುವುದರಲ್ಲಿ ನಿಸ್ಸೀಮರಾಗಿದ್ದರು.

	ಪ್ರಾಚೀನ ಶಿಲಾಯುಗದ ಮೇಲುಭಾಗದ ಸಂಸ್ಕøತಿಯ ಜನರಂತೆ ಗ್ರಾವೆಟ್ಟಿಯನರು ಕಲಾಕುಶಲಿಗಳೂ ಉತ್ತಮ ಅಭಿರುಚಿಯುಳ್ಳವರೂ ಆಗಿದ್ದರು. ದಂತದಿಂದ ವಿಶಿಷ್ಟ ಆಕಾರದ ಬಳೆ, ಕಡಗ ಮೊದಲಾದವನ್ನು ಕೊರೆಯುತ್ತಿದ್ದರು. ಕಲ್ಲು ಮತ್ತು ದಂತಗಳಲ್ಲಿ ವಿಕಟಾಕಾರದ, ಆದರೆ ರಮಣೀಯವಾದ ಕುಬ್ಜ ಸ್ತ್ರೀವಿಗ್ರಹಗಳನ್ನು ಬಿಡಿಸುತ್ತಿದ್ದರು.

	ಕ್ರೊ-ಮ್ಯಾಗ್ನನ್ ಹಾಗೂ ಮಾಗ್ಡಲೀನಿಯನರಂತೆ ಗ್ರಾವೆಟ್ಟಿಯನರು ಕೆಂಪು ಬಣ್ಣವನ್ನು ಬಹಳವಾಗಿ ಬಳಸುತ್ತಿದ್ದರು. ಆಫ್ರಿಕನ್ ಹಾಗೂ ಆಸ್ಟ್ರೇಲಿಯನ್ ಮೂಲನಿವಾಸಿಗಳಂತೆ ಶರೀರಕ್ಕೆ ಬಣ್ಣ ಹಚ್ಚಿಕೊಳ್ಳುತ್ತಿದ್ದರು. ಕೊರೆದ ರಂಧ್ರಗಳಿರುವ ಚಿಪ್ಪು, ಪಳೆಯುಳಿಕೆ, ಪ್ರಾಣಿಗಳ ದಂತಗಳು-ಇವುಗಳಿಂದ ಕಂಠಾಭರಣಗಳನ್ನೂ ಕೇಶಾಭರಣಗಳನ್ನೂ ಧರಿಸುತ್ತಿದ್ದರು. ಇವರು ಫ್ರಾನ್ಸಿನ ಗುಹೆಗಳಲ್ಲಿ ವರ್ಣರಂಜಿತ ಚಿತ್ರಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಚಿತ್ರಗಳನ್ನು ಡಾರ್ಡಾನಿ ಪ್ರದೇಶದ ಲಾಸ್ ಕಾ ಮುಂತಾದ ಗುಹೆಗಳಲ್ಲಿ ಕಾಣಬಹುದು.										(ಎಸ್.ವಿ.ಎಸ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ